ಸಾಗರ: ತಾಲೂಕಿನ ಕರೂರು ಹೋಬಳಿಯ ಹಾಳಸಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದ್ದು, ಒಂದನೇ ತರಗತಿಯ ಪುಟ್ಟ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರ ತ್ರಿಲೋಕ್ ಜೈನ್ (6 ವರ್ಷ) ಮೃತಪಟ್ಟ ದುರ್ದೈವಿ ಬಾಲಕ. ಶನಿವಾರ ಮಧ್ಯಾಹ್ನ ಶಾಲೆ ಮುಗಿಯುವ ಸಮಯದಲ್ಲಿ ಬಾಲಕ ತ್ರಿಲೋಕ್ ಜೈನ್ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಎಚ್ಚೆತ್ತ ಶಾಲಾ ಸಿಬ್ಬಂದಿ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಿದರಾದರೂ, ಮಾರ್ಗ ಮಧ್ಯದಲ್ಲೇ ಆತ ಕೊನೆಯುಸಿರೆಳೆದಿದ್ದಾನೆ. ವೈದ್ಯರು ತಪಾಸಣೆ ನಡೆಸಿ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಧೃಡೀಕರಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ:
ಆಟವಾಡಿ ಮನೆಗೆ ಬರಬೇಕಾಗಿದ್ದ ಪುಟ್ಟ ಕಂದನ ಹಠಾತ್ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಕೊಡನವಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಬಾಲಕನ ಅಕಾಲಿಕ ನಿಧನಕ್ಕೆ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ (SDMC) ಸದಸ್ಯರು ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ತೀವ್ರ ಕಂಬನಿ ಮಿಡಿದು, ಮೃತನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.