ಪಾಗಲ್ ಪ್ರೇಮಿಯ ಕಾರು ಸ್ಫೋಟ ಪ್ರಕರಣ: ಕರಾವಳಿಯಲ್ಲಿ ಭೇದಿಸಲಾಯ್ತು ನಾಡಬಾಂಬ್ ಅಕ್ರಮ ಜಾಲ; ಮೂವರು ವಶಕ್ಕೆ!
ಅಂಕೋಲಾ: ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಪಾಗಲ್ ಪ್ರೇಮಿಯ ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಖಾಕಿ ಪಡೆಗೆ ಇದೀಗ ದೊಡ್ಡ ಶಾಕ್ ಎದುರಾಗಿದೆ. ಮೃತ ನಾಗೇಂದ್ರನ ಮೊಬೈಲ್ ಕರೆಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ನಾಡಬಾಂಬ್ ತಯಾರಿಕೆಯ ಅಕ್ರಮ ಜಾಲ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮೃತ ನಾಗೇಂದ್ರ ಗೌಡನ ಮೊಬೈಲ್ ಸಂಬಾಷಣೆಯನ್ನು ಆಧರಿಸಿ ಸರಿಸುಮಾರು 35 ಜನಕ್ಕೂ ಹೆಚ್ಚಿನ ಜನರಿಗೆ ವಿಚಾರಣೆ ನಡೆಸಿದ್ದ ಪೊಲೀಸರು ತಾಲೂಕಿನ ಶಿರಗುಂಜಿ ಮೂಲದ ಸಂದೀಪ್ ಹಾಗೂ ಸರಲೇಬೈಲ್ ಮೂಲದ ಮೃತ ನಾಗೇಂದ್ರನ ಅತ್ತೆ ಮಕ್ಕಳಾದ ನಾರಾಯಣ ಗೌಡ,ನಾಗರಾಜ್ ಗೌಡರನ್ನು ವಶಕ್ಕೆ ಪಡೆದಿದ್ದು,ಅಗಸೂರು ಸಮೀಪದ ದಟ್ಟಡವಿಯಲ್ಲಿ ಜೀವಂತ ನಾಡಬಾಂಬಗಳನ್ನು ಬಚ್ಚಿಟ್ಟಿರುವ ಕುರಿತು ಮಾಹಿತಿ ನೀಡಿದ್ದಾರೆ.3 ಜೀವಂತ ನಾಡ ಬಾಂಬಗಳನ್ನು ಪತ್ತೆ ಹಚ್ಚುವಲ್ಲಿ ಬಾಂಬ್ ಪತ್ತೆದಳ ಯಶಸ್ವಿಯಾಗಿದ್ದು,ಮಂಗಳವಾರ ಮಧ್ಯಾಹ್ನ ಧಾರವಾಡದ ಬಾಂಬ್ ನಿಷ್ತ್ರೀಯ ದಳ ಆಗಮಿಸಿ ನಾಡಬಾಂಬ್ ಅನ್ನು ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ ಎನ್ನಲಾಗಿದೆ. ನಾಡ ಬಾಂಬ್ ಬಗ್ಗೆ ಮತ್ತಷ್ಟು ವಿಚಾರಣೆ ತೀವ್ರಗೊಳಿಸಿದ ಪೊಲೀಸರು ಬಾಂಬ್ ತಯಾರಿಸುತ್ತಿದ್ದ ಎನ್ನಲಾಗಿದ್ದ ಹೊನ್ನಾವರ ಚಂದಾವರ ಮೂಲದ ಜಾರ್ಜ್ ಫರ್ನಾಂಡಿಸ್ (63) ಎನ್ನುವುದು ಬೆಳಕಿಗೆ ಬಂದಿದೆ.ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಾರ್ಜ್ ಫರ್ನಾಂಡಿಸ್ ಡಿಸ್ಚಾರ್ಜ್ ಆದ ಬಳಿಕ ಮತ್ತಷ್ಟು ವಿಚಾರಗಳು ಹೊರಬೀಳಬೇಕಿದೆ.
ದಟ್ಟ ಅರಣ್ಯದಲ್ಲಿ ಖಾಕಿ ಶೋಧ: ಜೀವಂತ ಬಾಂಬ್ ವಶ
ಘಟನೆಯೂ ಗಂಭೀರ ಸ್ವರೂಪ ಪಡೆಯಿತ್ತಿದ್ದಂತೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಮೂರು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯ ಕೈಗೊಳ್ಳುವಂತೆ ಹೇಳಿದ್ದರು. ಅದರಂತೆಯೇ ಗೋಕರ್ಣ ಸಿಪಿಐ ಶ್ರೀಧರ್ ಎಸ್.ಆರ್. ಹಾಗೂ ಅಂಕೋಲಾ ಸಿಪಿಐ ಚಂದ್ರಶೇಖರ್ ಮಠಪತಿ ನೇತೃತ್ವದ ತಂಡಗಳು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು.
ಅಗಸೂರು ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ತೀವ್ರ ಜಾಲಾಟ ನಡೆಸಿದಾಗ, ಸೋಮವಾರ ಮಧ್ಯರಾತ್ರಿ ಮೂರು ಜೀವಂತ ಬಾಂಬ್‌ಗಳು ಪತ್ತೆಯಾಗಿದ್ದವು. ಇದರ ಮುಂದುವರಿದ ಭಾಗವಾಗಿ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಕಾಡಿನೊಳಗೆ ಬಚ್ಚಿಟ್ಟಿದ್ದ ಮತ್ತೂ ಎರಡು ಜೀವಂತ ಬಾಂಬ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ಜಾಗೃತ ದಳ ಯಶಸ್ವಿಯಾಗಿದೆ.

ಬೇಟೆಯ ನೆಪದಲ್ಲಿ ಬಾಂಬ್ ಪೂರೈಕೆ?
ಪ್ರಾಥಮಿಕ ತನಿಖೆಯ ಪ್ರಕಾರ, ಈ ಭಾಗದಲ್ಲಿ ಪ್ರಮುಖವಾಗಿ ಗಂಗಾವಳಿ ನದಿ ಹರಿಯುತ್ತಿರುವುದರಿಂದ ಮೀನುಗಾರಿಕೆ ಹಾಗೂ ಕಾಡು ಪ್ರಾಣಿಗಳ ಬೇಟೆಯಾಡುವ ಉದ್ದೇಶಗಳಿಗಾಗಿ ಅಕ್ರಮವಾಗಿ ನಾಡಬಾಂಬ್‌ಗಳನ್ನು ತರಿಸಿಕೊಳ್ಳಲಾಗುತ್ತಿತ್ತು ಎನ್ನುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಮೃತ ನಾಗೇಂದ್ರನಿಗೂ ಹಾಗೂ ಈ ಜಾಲಕ್ಕೂ ಇದ್ದ ಲಿಂಕ್ ಪತ್ತೆ ಹಚ್ಚಲು ಪೊಲೀಸರು ವಶದಲ್ಲಿರುವ ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಧಾರವಾಡ ಬಾಂಬ್ ನಿಷ್ಕ್ರಿಯ ದಳ
ಅರಣ್ಯದಲ್ಲಿ ಪತ್ತೆಯಾದ ಜೀವಂತ ಬಾಂಬ್‌ಗಳ ತೀವ್ರತೆಯನ್ನು ಪರಿಶೀಲಿಸಲು ಧಾರವಾಡದಿಂದ ವಿಶೇಷ ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಿಸಿಕೊಳ್ಳಲಾಗಿತ್ತು. ತಜ್ಞರ ತಂಡವು ಸ್ಥಳಕ್ಕೆ ಧಾವಿಸಿ, ಬಾಂಬ್‌ಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ಪ್ರಕರಣದ ಬೆನ್ನತ್ತಿರುವ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಈ ಅಕ್ರಮ ನಾಡಬಾಂಬ್ ಜಾಲದ ಹಿಂದೆ ಇನ್ನು ಯಾರಿದ್ದಾರೆ? ಇದರ ಮುಖ್ಯ ಸೂತ್ರಧಾರ ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ಶೋಧ ಮುಂದುವರಿಸಿದ್ದಾರೆ. ಕರಾವಳಿ ಭಾಗದಲ್ಲಿ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.