ಉತ್ತರ ಕನ್ನಡದಲ್ಲಿ ಕರಾಳ ದಂದೆ: ಕಾಡುಪ್ರಾಣಿಗಳ ಬೇಟೆಗೆ ‘ನಾಡ ಬಾಂಬ್’ ತಯಾರಿಕಾ ಜಾಲ ಪತ್ತೆ!
ಕಾರವಾರ: ತುಮಕೂರು ಶಿರಾದಲ್ಲಿ ಪ್ರೇಮ ವೈಫಲ್ಯದ ಹಿನ್ನೆಲಯಲ್ಲಿ ಸ್ಪೋಟಿಸಿಕೊಂಡ ಆತ್ಮಹತ್ಯೆ ಶರಣಾದ ಯುವಕನ ಕೈಗೆ ನಾಡ ಬಾಂಬ್ ಹೇಗೆ ದೊರೆಯಿತು ಎನ್ನುವದರ ಹಿಂದೆ ಬಿದ್ದ ಪೊಲೀಸರಿಗೆ ಬಾಂಬ್ ತಯಾರಿಕಾ ವಿಸ್ತೃತ ಜಾಲ ನೋಡಿ ಬೆಚ್ಚಿಬಿದ್ದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅಕ್ರಮವಾಗಿ ನಾಡು ಬಾಂಬ್ ಹಾಗೂ ಬಂದೂಕುಗಳನ್ನು ತಯಾರಿಸಿ, ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿರುವ ಕರಾಳ ದಂದೆಯೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಹಳಿಯಾಳ ಹಾಗೂ ತುಮಕೂರು ಬಳಿಯ ಶಿರಾದಲ್ಲಿ ಕಾರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳ ಬೆನ್ನಲ್ಲೇ ತೀವ್ರವಾಗಿ ತನಿಖೆ ಕೈಗೊಂಡಿರುವ ಖಾಕಿ ಪಡೆ ಈ ಜಾಲದ ಕುರುಹುಗಳನ್ನು ಪತ್ತೆ ಮಾಡಿದ್ದು, ದಂದೆಯನ್ನು ಬುಡ ಸಮೇತ ಕಿತ್ತು ಹಾಕಲು ಮುಂದಾಗಿದೆ.
ತುಮಕೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಬಂಧನ!
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದ ಪಾಗಲ್ ಪ್ರೇಮಿಯ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ,ಪ್ರಕರಣದ ಜಾಡು ಬಿಸಿದ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಮೂರು ತಂಡಗಳಾಗಿ ಪರಿಶೀಲನೆ ನಡೆಸುತ್ತಿದ್ದು,ಸರಿಸುಮಾರು 35 ಜನಕ್ಕೂ ಹೆಚ್ಚಿನ ಜನರಿಗೆ ವಿಚಾರಣೆ ನಡೆಸಿದ್ದು, ಬಾಂಬ್ ತಯಾರಿಸುತ್ತಿದ್ದ ಹೊನ್ನಾವರ ಚಂದಾವರ ಮೂಲದ ಜಾರ್ಜ್ ಫರ್ನಾಂಡಿಸ್ (63) ಹಾಗೂ ಆತನಿಂದ ನಾಡಬಾಂಬ್ ಖರೀದಿ ಮಾಡಿದ್ದ ಅಂಕೋಲಾ ತಾಲೂಕಿನ ಶಿರಗುಂಜಿ ಮೂಲದ ಸಂದೀಪ್ ಹಾಗೂ ಸರಲೇಬೈಲ್ ಮೂಲದ ಮೃತ ನಾಗೇಂದ್ರ ಅತ್ತೆ ಮಕ್ಕಳಾದ ನಾರಾಯಣ ಗೌಡ,ನಾಗರಾಜ್ ಗೌಡರನ್ನು ವಶಕ್ಕೆ ಪಡೆದಿದ್ದಾರೆ. ಅಗಸೂರು ಸಮೀಪದ ದಟ್ಟಡವಿಯಲ್ಲಿ ಜೀವಂತ ನಾಡಬಾಂಬಗಳನ್ನು ಬಚ್ಚಿಟ್ಟಿರುವ ಕುರಿತು ಮಾಹಿತಿ ನೀಡಿದ್ದು,3 ಜೀವಂತ ನಾಡ ಬಾಂಬಗಳನ್ನು ಪತ್ತೆ ಹಚ್ಚುವಲ್ಲಿ ಬಾಂಬ್ ಪತ್ತೆದಳ ಹಾಗೂ ಅಂಕೋಲಾ,ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಂತರ ಧಾರವಾಡದ ಬಾಂಬ್ ನಿಷ್ತ್ರೀಯ ದಳ ಆಗಮಿಸಿ ನಾಡಬಾಂಬ್ ಅನ್ನು ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ ಎನ್ನಲಾಗಿದೆ.
ಅರಣ್ಯ ಇಲಾಖೆ ನಿರ್ಲಕ್ಷ್ಯ,ಕಾಂತಾರ ಸ್ಟೈಲಿನಲ್ಲಿ ಬೇಟೆ!
ಅರಣ್ಯ ಇಲಾಖೆಯ ಸತತ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈ ಅಕ್ರಮ ಜಾಲವು ವರ್ಷದಿಂದ ವರ್ಷಕ್ಕೆ ಹೆಮ್ಮರವಾಗಿ ಬೆಳೆಯುತ್ತಿದ್ದು, ಕನ್ನಡದ ಪ್ರಸಿದ್ಧ ಚಲನಚಿತ್ರ ಕಾಂತಾರ ಸ್ಟೈಲಿನಲ್ಲಿ ಬಂದೂಕು ಹಾಗೂ ನಾಡ ಬಾಂಬ್ ಮೂಲಕ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಮಲೆನಾಡು ಹಾಗೂ ಕರಾವಳಿ ತಾಲೂಕುಗಳು ಸಂಧಿಸುವ ಗ್ರಾಮೀಣ ಭಾಗಗಳಲ್ಲಿ ಈ ಮಾರಕ ವಸ್ತುಗಳ ಬಳಕೆ ಯಥೇಚ್ಛವಾಗಿ ನಡೆಯುತ್ತಿರುವುದು ತನಿಖೆಯಿಂದ ಬಹಿರಂಗವಾಗಿದೆ. ಜಿಲ್ಲೆಯ ಘಟ್ಟದ ತಾಲೂಕುಗಳಾದ ಯಲ್ಲಾಪುರ, ಹಳಿಯಾಳ ಹಾಗೂ ಕರಾವಳಿ ತಾಲೂಕುಗಳಾದ ಕುಮಟಾ ಮತ್ತು ಹೊನ್ನಾವರ ಭಾಗಗಳಲ್ಲಿ ನಾಡ ಬಾಂಬ್ ತಯಾರಿಕಾ ದಂದೆ ಅವಿರಾತವಾಗಿ ನಡೆಯುತ್ತಿದ್ದು, ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 200 ರಿಂದ 500 ರೂಪಾಯಿಗಳಿಗೆ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ. ಬಾಂಬ್‌ಗಳಲ್ಲಿ ಬಳಸುವ ‘ನೈಟ್ರೇಟ್’ ರಾಸಾಯನಿಕದ ಪ್ರಮಾಣದ ಮೇಲೆ ಇದರ ತೀವ್ರತೆಯನ್ನು ನಿರ್ಧರಿಸಲಾಗುತ್ತದೆ. ನೈಟ್ರೇಟ್ ಪ್ರಮಾಣ ಹೆಚ್ಚಿದ್ದಷ್ಟೂ ಸ್ಫೋಟದ ತೀವ್ರತೆ ಭೀಕರವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಕಾಡುಪ್ರಾಣಿ ಬೇಟೆಯ ಪ್ರಮುಖ ಅಸ್ತ್ರ!
ಮುಖ್ಯವಾಗಿ ಕಾಡುಹಂದಿಗಳ ಬೇಟೆಗಾಗಿ ಈ ನಾಡು ಬಾಂಬ್‌ಗಳನ್ನು ಬಳಸಲಾಗುತ್ತಿದೆ.
ಕೋಳಿಯ ಮಾಂಸದೊಳಗೆ ಈ ಬಾಂಬ್ ಅನ್ನು ಸುತ್ತಿ ಕಾಡಿನ ಅಂಚಿನಲ್ಲಿ ಇಡಲಾಗುತ್ತದೆ.
ಆಹಾರ ಅರಸಿ ಬರುವ ಕಾಡುಹಂದಿಗಳು ಇದನ್ನು ತಿನ್ನಲು ಕಚ್ಚಿದ ತಕ್ಷಣ, ಒತ್ತಡಕ್ಕೆ ಬಾಂಬ್ ಒಮ್ಮೆಲೇ ಬ್ಲಾಸ್ಟ್ ಆಗುತ್ತದೆ.
ಸ್ಫೋಟದ ತೀವ್ರತೆಗೆ ಹಂದಿಯ ಮುಖ ಮತ್ತು ತಲೆಯ ಭಾಗ ಸಂಪೂರ್ಣ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪುತ್ತದೆ ಎನ್ನಲಾಗಿದೆ.ಹೀಗೆ ಬೇಟೆಯಾಡಿದ ಒಂದು ಕಾಡುಹಂದಿಯ ಮಾಂಸವನ್ನು 10 ರಿಂದ 15 ಸಾವಿರ ರೂಪಾಯಿಗಳಿಗೆ ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ. ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಮಾತ್ರ ಅವನತಿ ಹಂತದಲ್ಲಿರುವ ಕಾಡುಪ್ರಾಣಿಗಳ ಸಂತತಿಗೆ ಮಾರಕವಾಗಿದೆ. ಕೇವಲ ಕಾಡುಪ್ರಾಣಿಗಳಷ್ಟೇ ಅಲ್ಲದೆ, ನದಿ ಹಾಗೂ ಹಳ್ಳಗಳಲ್ಲಿ ಮೀನು ಸೇರಿದಂತೆ ಜಲಚರಗಳ ಬೇಟೆಗೂ ಅಪಾಯಕಾರಿ ಪೆಟ್ರೋಲ್ ಬಾಂಬ್ ಗಳನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್‌ನಲ್ಲಿ ಪೆಟ್ರೋಲ್ ಬಾಂಬ್ ಸುತ್ತಿ ನೀರಿನಾಳಕ್ಕೆ ಬಿಡಲಾಗುತ್ತದೆ. ಅದು ಒಳಗಡೆ ಭೀಕರವಾಗಿ ಸ್ಫೋಟಗೊಂಡಾಗ ಸುತ್ತಮುತ್ತಲಿನ ಮೀನುಗಳು ಸಾಯುತ್ತವೆ. ಇನ್ನು ಕೆಲವು ಮೀನುಗಳು ದಿಕ್ಕೆಟ್ಟು ನೀರಿನಾಳದಿಂದ ಮೇಲಕ್ಕೆ ಬಂದಾಗ ಸುಲಭವಾಗಿ ಬಲೆಗೆ ಬೀಳುತ್ತವೆ. ಇದರಿಂದ ಇಡೀ ಜಲಚರ ವ್ಯವಸ್ಥೆಯೇ ನಾಶವಾಗುತ್ತಿದೆ.

ಗದ್ದೆ-ತೋಟಗಳಲ್ಲಿ ಅಡವಿಯಲ್ಲಿ ಬಚ್ಚಿಡುತ್ತಿರುವ ನಾಡ ಬಾಂಬ್ ಗಳು!
ಕಾಡು ಪ್ರಾಣಿಗಳ ಬೇಟೆಗೆ ಹೆಚ್ಚಿನದಾಗಿ ನಾಡಬಾಂಬ್ ಗಳನ್ನು ಬಳಸುತ್ತಿದ್ದು,ಉಡಾ, ಕಾಡುಕೋಣ ಹಾಗೂ ಕಡವೆಗಳಂತಹ ದೊಡ್ಡ ಪ್ರಾಣಿಗಳ ಬೇಟೆಗೆ ‘ನಾಡು ಬಂದೂಕು’ಗಳನ್ನು ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಮನೆಗಳ ಮೇಲೆ ಸರಣಿ ದಾಳಿ ನಡೆಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಬೇಟೆಗಾರರು, ತಮ್ಮ ಬಂದೂಕುಗಳನ್ನು ಮನೆಗಳಲ್ಲಿ ಇಡದೆ ತೋಟ ಹಾಗೂ ಗದ್ದೆಗಳ ಮಣ್ಣಿನಡಿ ಮುಚ್ಚಿಡುತ್ತಿದ್ದಾರೆ ಹಾಗೆಯೇ ನಾಡಬಾಂಬ್ ಗಳನ್ನು ಅರಣ್ಯ ಪ್ರದೇಶದಲ್ಲಿ ಬಚ್ಚಿಡುತ್ತಿದ್ದಾರೆ ಎನ್ನಲಾಗಿದೆ.ಈಗಲಾದರೂ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಠಿಣ ಕಾರ್ಯಾಚರಣೆ ನಡೆಸಿ, ಪಶ್ಚಿಮ ಘಟ್ಟದ ಜೀವವೈವಿಧ್ಯವನ್ನು ಹಾಗೂ ಸಾರ್ವಜನಿಕರ ಜೀವವನ್ನು ಬಲಿಪಡೆಯುತ್ತಿರುವ ಈ ಮಾರಕ ಜಾಲವನ್ನು ಬೇರುಸಹಿತ ಕಿತ್ತೊಗೆಯಬೇಕಿದೆ ಎನ್ನುವುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.