ನವದೆಹಲಿ: ರಾಜಿಯಾಗಬಹುದಾದ ಅಪರಾಧಪ್ರಕರಣಗಳಲ್ಲಿ, ಶಿಕ್ಷೆಗೊಳಗಾದ ನಂತರವೂ ಪರಿಪೂರ್ಣ ನ್ಯಾಯವನ್ನು ಪಡೆದುಕೊಳ್ಳಲು ಕಕ್ಷಿದಾರರಿಗೆ ರಾಜಿ ಸಂಧಾನಕ್ಕೆ ಅವಕಾಶ ನೀಡಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಪ್ರಕರಣವೊಂದರ ವಿಚಾರಣೆ ವೇಳೆ ಮಹತ್ವದ ಆದೇಶ ಹೊರಡಿಸಿದೆ.

ಹೌದು…ರಾಜ್ಯದ ಮಂಡ್ಯ ಜಿಲ್ಲೆಯ ದಂಪತಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪ್ರಸನ್ನ ಬಿ. ವರಾಲೆ ಅವರ ಪೀಠವು ದಂಪತಿ ನಡುವಿನ ಕಲಹ ಇತ್ಯರ್ಥಗೊಂಡು, ಶಾಂತಿಯುತವಾಗಿ ಹೊಂದಾಣಿಕೆಯ ಜೀವನವನ್ನು ಪ್ರಾರಂಭಿಸಿರುವುದನ್ನು ಖಚಿತಪಡಿಸಿಕೊಂಡ ನ್ಯಾಯಾಲಯ ಈ ಹಿಂದೆ ಪತ್ನಿ ದಾಖಲಿಸಿದ್ದ ಪ್ರಕರಣದಿಂದ ಪತಿಯನ್ನು ಮುಕ್ತಗೊಳಿಸಿದೆ.
ಏನಿದು ಪ್ರಕರಣ?ಪತ್ನಿ ಸಣ್ಣತಾಯಮ್ಮ ಅವರ ಮೇಲೆ ಅಪಾಯಕಾರಿ ಆಯುಧದಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ, ಮಂಡ್ಯದ ಹೆಚ್ಚುವರಿ ಸೆಷನ್ಸ್ ಕೋರ್ಟ್ ಪತಿ ಮಹದೇವಯ್ಯ ಅವರನ್ನು 2013ರಲ್ಲಿ ದೋಷಿ ಎಂದು ತೀರ್ಪು ನೀಡಿ, 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ನಂತರ ಕರ್ನಾಟಕ ಹೈಕೋರ್ಟ್ 2025ರಲ್ಲಿ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಈ ಪ್ರಕರಣದ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದಾಗ, ಮಹದೇವಯ್ಯ ಮತ್ತು ಅವರ ಪತ್ನಿ ಜಂಟಿಯಾಗಿ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದರು ಇದನ್ನು ಸೂಕ್ಷ್ಮವಾಗಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ ಇದಕ್ಕೆ ಅವಕಾಶ ಕಲ್ಪಿಸಿದೆ.ಹೀಗಿದೆ ಆದೇಶ!ಪತಿಯಿಂದ ಪತ್ನಿಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ‘ಪರಿಪೂರ್ಣ ನ್ಯಾಯ’ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ 142ನೇ ವಿಧಿ ಕಲ್ಪಿಸಿರುವ ಅಧಿಕಾರವನ್ನು ಚಲಾಯಿಸಿರುವುದಾಗಿ ಹೇಳಿದ ನ್ಯಾಯಪೀಠವು, ‘ಕಕ್ಷಿದಾರರು ತಮ್ಮ ನಡುವಿನ ವ್ಯಾಜ್ಯವನ್ನು ಪ್ರಾಮಾಣಿಕವಾಗಿ ಬಗೆಹರಿಸಿಕೊಂಡಿದ್ದರೆ, ವೈಯಕ್ತಿಕ ಸ್ವರೂಪದ, ರಾಜಿಯಾಗಬಹುದಾದ ಅಪರಾಧ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಕೊನೆಗೊಳಿಸಬಹುದು’ ಎಂದಿದೆ.
