ಭಟ್ಕಳದಲ್ಲಿ ಗಾಂಜಾ ಘಮಲು! ಕಾರು ಸಮೇತ ಆರೋಪಿ ಬಂಧನ!
ಭಟ್ಕಳ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನೋರ್ವನನ್ನು ಮಾದಕ ದ್ರವ್ಯ ಸಮೇತ ಬಂಧಿಸುವಲ್ಲಿ ಶಹರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು…ಭಟ್ಕಳ ಶಹರದ ಮುಗ್ಗುಂ ಕಾಲೋನಿಯ ಮೌಂಟೆನ್ ಗ್ರೌಂಡ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ವೇಳೆಯಲ್ಲಿ ಭಟ್ಕಳದ ಹೆಬಳೆ ನಿವಾಸಿ 24 ವರ್ಷದ ಅಬ್ರಾರ್ ಶೇಖ ಬಂಧಿತ ಆರೋಪಿಯಾಗಿದ್ದು,ಆರೋಪಿತನು ಯಾವುದೇ ಪರವಾನಿಗೆ ಇಲ್ಲದೆ, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಗಾಂಜಾವನ್ನು ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ದಾಳಿಯ ವೇಳೆ ಅಂದಾಜು 5,000 ರೂಪಾಯಿ ಮೌಲ್ಯದ 84 ಗ್ರಾಂ ತೂಕದ ಗಾಂಜಾ ಹಾಗೂ ಗಾಂಜಾ ಪ್ಯಾಕ್ ಮಾಡಲು ಬಳಸುತ್ತಿದ್ದ 12 ಖಾಲಿ ಟ್ರಾನ್ಸ್‌ಪರೆಂಟ್ ಪ್ಲಾಸ್ಟಿಕ್ ಸ್ಯಾಚೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಗಾಂಜಾ ಸಂಗ್ರಹಿಸಿಡಲು ಬಳಸಲಾಗಿದ್ದ ಅಂದಾಜು 5 ಲಕ್ಷ ರೂಪಾಯಿ ಮೌಲ್ಯದ ಬಿಳಿ ಬಣ್ಣದ ಹೊಂಡಾ ಸಿಟಿ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸೈ ನವೀನ್ ಎಸ್ ನಾಯ್ಕ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಸೋಮರಾಜ ಟಿ. ರಾಠೋಡ ಅವರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
