ಕಾರವಾರ: ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಆವರಣದಲ್ಲಿ ಜೇನುನೊಣಗಳು ದಾಳಿ ನಡೆಸಿದ ಪರಿಣಾಮ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಹೌದು… ಶಾಲೆಯ ಮುಖ್ಯ ಕಟ್ಟಡದಲ್ಲಿ ಜೇನುನೊಣಗಳು ಗೂಡನ್ನು ಕಟ್ಟಿಕೊಂಡಿತ್ತು, ಪರಿಣಾಮ ವಿದ್ಯಾರ್ಥಿಯೊಬ್ಬರು ಜೇನುಗೂಡಿಗೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಕಲ್ಲು ಬಿದ್ದ ರಭಸಕ್ಕೆ ಪ್ರಚೋದನೆಗೊಂಡ ಜೇನುನೊಣಗಳು ಏಕಾಏಕಿ ಶಾಲಾ ಆವರಣದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ ಎನ್ನಲಾಗಿದೆ. ಹಾಗೆಯೇ ವಿದ್ಯಾರ್ಥಿಗಳನ್ನು ರಕ್ಷಿಸಲು ಹೋದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಇತರೆ ಸಿಬ್ಬಂದಿಗಳ ಮೇಲೆಯೂ ಜೇನುನೊಣಗಳು ದಾಳಿ ನಡೆಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೇನು ಕಡಿತದಿಂದ ತೀವ್ರ ಅಸ್ವಸ್ಥರಾಗಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಕ್ಷಣವೇ ಮುಂಡಗೋಡು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.ಘಟನೆಯಿಂದಾಗಿ ಶಾಲಾ ಆವರಣದಲ್ಲಿ ಹಾಗೂ ಪೋಷಕರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
