ಪುತ್ತೂರು-ಪಣಜಿ ಬಸ್ ನಿರ್ವಾಹಕನ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಹಲ್ಲೆ!
ಕಾರವಾರ: ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ನಿರ್ವಾಹಕನ (ಕಂಡಕ್ಟರ್) ಮುಖಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದಾರುಣವಾಗಿ ಗುದ್ದಿ ಹಲ್ಲೆ ನಡೆಸಿರುವ ಘಟನೆ ಕಾರವಾರ ತಾಲೂಕಿನ ಕೊಡಿಬಾಗ ಹೆದ್ದಾರಿಯಲ್ಲಿ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಕಾರವಾರ ತಾಲೂಕಿನ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನಿಂದ ಗೋವಾದ ಪಣಜಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಬಸ್ ಕೊಡಿಬಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಟಿಕೆಟ್ ಪಡೆಯುವ ವಿಷಯದಲ್ಲಿ ನಿರ್ವಾಹಕ ಹಾಗೂ ವಿದ್ಯಾರ್ಥಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ವಿದ್ಯಾರ್ಥಿ, ನಿರ್ವಾಹಕನ ಮುಖಕ್ಕೆ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ದಾವಣಗೆರೆ ಮೂಲದ ಪ್ರದೀಪ ನಾಯ್ಕ ಎಂದು ಗುರುತಿಸಲಾಗಿದೆ. ಈತ ಮಾಜಾಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದ.
ಘಟನೆ ಸಂಭವಿಸುತ್ತಿದ್ದಂತೆ ವಿಷಯ ತಿಳಿದ ಚಿತ್ತಾಕುಲ ಠಾಣೆಯ ಪಿಎಸೈ (PSI) ನಿಹಾಲ್ ಖಾನ್ ಅವರು ಸ್ಥಳಕ್ಕೆ ಧಾವಿಸಿ, ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.