ಕರ್ತವ್ಯದ ಒತ್ತಡ, ಕೌಟುಂಬಿಕ ಸಮಸ್ಯೆ: ಅರ್ಧ ಆಯುಷ್ಯಕ್ಕೇ ಕೊನೆಗೊಳ್ಳುತ್ತಿದೆ ಪೊಲೀಸರ ಬದುಕು!
BENGALURU:ಖಾಕಿ ತೊಟ್ಟು, ಲಾಠಿ ಹಿಡಿದು, ಮುಖದಲ್ಲಿ ಗತ್ತು, ನಡಿಗೆಯಲ್ಲಿ ಗಾಂಭೀರ್ಯ, ದೂರದಿಂದ ನಿಂತು ನೋಡುವ ಜನರಿಗೆ ಪೊಲೀಸ್ ನೌಕರಿ ಎಂದರೆ ಒಂದು ರೀತಿಯ ಹೆಮ್ಮೆ ಮತ್ತು ಆಕರ್ಷಣೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಗತ್ತು-ಗಾಂಭೀರ್ಯದ ಹಿಂದಿರುವ ಕಟು ವಾಸ್ತವ ತೀರಾ ಆತಂಕಕಾರಿಯಾಗಿದೆ. ಸದಾ ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಪೊಲೀಸ್ ಸಿಬ್ಬಂದಿಯ ಬದುಕು ಇಂದು ಒತ್ತಡದ ಸುಳಿಗೆ ಸಿಲುಕಿ, ಅರ್ಧ ಆಯುಷ್ಯಕ್ಕೇ ಕೊನೆಗೊಳ್ಳುತ್ತಿರುವ ಆಘಾತಕಾರಿ ಸತ್ಯಗಳು ಮುನ್ನೆಲೆಗೆ ಬರುತ್ತಿವೆ.


ಮಿತಿಮೀರಿದ ಒತ್ತಡ: ಕೌಟುಂಬಿಕ ನೆಮ್ಮದಿ ದೂರ
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯಕ್ಕೆ ಹೊತ್ತು-ಗೊತ್ತೆಂಬುದೇ ಇಲ್ಲದಂತಾಗಿದೆ. ದಿನದ 24 ಗಂಟೆಯೂ ಅಲರ್ಟ್ ಆಗಿರಬೇಕಾದ ಪರಿಸ್ಥಿತಿ ಇವರದ್ದು. ಹಬ್ಬ-ಹರಿದಿನಗಳು, ಸಭೆ-ಸಮಾರಂಭಗಳು ಬಂತೆಂದರೆ ಸಾಕು, ಇಡೀ ಜಗತ್ತು ಸಂಭ್ರಮದಲ್ಲಿದ್ದರೆ ಪೊಲೀಸರು ಮಾತ್ರ ‘ಬಂದೋಬಸ್ತ್’ ಎಂಬ ರಾಕ್ಷಸನ ಕಪಿಮುಷ್ಟಿಯಲ್ಲಿ ಸಿಲುಕಿರುತ್ತಾರೆ. ಈ ಮಿತಿಮೀರಿದ ಕರ್ತವ್ಯದ ಒತ್ತಡ ನೇರವಾಗಿ ಅವರ ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಹೆಂಡತಿ-ಮಕ್ಕಳೊಂದಿಗೆ ಕಳೆಯಲು ಕನಿಷ್ಠ ಸಮಯವೂ ಸಿಗುತ್ತಿಲ್ಲ. ಇದರಿಂದಾಗಿ ಇಲಾಖೆಯ ಬಹುತೇಕ ಸಿಬ್ಬಂದಿ ತೀವ್ರ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನಿದ್ರಾಹಾರವಿಲ್ಲದ ಜೀವನ: ಆರೋಗ್ಯದಲ್ಲಿ ಏರುಪೇರು
ಯಾವಾಗ ಕರೆ ಬರುತ್ತದೋ, ಎಲ್ಲಿಗೆ ಓಡಬೇಕೋ ತಿಳಿಯದ ಸ್ಥಿತಿ. ಕಳ್ಳರ ಜಾಡು ಹಿಡಿಯಲು ದೇಶಾಂತರ ಅಲೆದಾಡಬೇಕಾದ ಅನಿವಾರ್ಯತೆ ಇರುತ್ತದೆ. ಸಮಯಕ್ಕೆ ಸರಿಯಾಗಿ ಊಟವಿಲ್ಲ, ರಾತ್ರಿಯಿಡೀ ನಿದ್ರೆಯಿಲ್ಲ. ಪರಿಣಾಮವಾಗಿ ಯುವ ವಯಸ್ಸಿನಲ್ಲೇ ಪೊಲೀಸರು ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ನಿಭಾಯಿಸಲಾಗದೆ, ಕೆಲವರು ವಿಪರೀತ ಮದ್ಯಸೇವನೆ ಸೇರಿದಂತೆ ವಿವಿಧ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಇನ್ನು ಕೆಲವರು ಆತ್ಮಹತ್ಯೆಯಂತಹ ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ ಇದರಿಂದಾಗಿ ಇಲಾಖೆಯ ಒಳಗಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಅವೈಜ್ಞಾನಿಕ ವರ್ಗಾವಣೆ: ಮಕ್ಕಳ ಶಿಕ್ಷಣಕ್ಕೆ ಕುತ್ತು!
ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ಜೀವನದ ಶಿಸ್ತನ್ನು ಕೆಡಿಸುತ್ತಿರುವುದರಲ್ಲಿ ಅವೈಜ್ಞಾನಿಕ ವರ್ಗಾವಣೆಗಳೂ ಪ್ರಮುಖ ಪಾತ್ರ ವಹಿಸುತ್ತಿವೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಥವಾ ಯಾವುದೇ ಮುನ್ಸೂಚನೆ ಇಲ್ಲದೆ ನಡೆಯುವ ವರ್ಗಾವಣೆಗಳಿಂದಾಗಿ ಇವರ ಮಕ್ಕಳ ಶಿಕ್ಷಣಕ್ಕೆ ಭಾರಿ ಕುತ್ತು ಬಂದೊದಗಿದೆ. ಪ್ರತಿ ಬಾರಿ ಜಾಗ ಬದಲಾದಾಗಲೂ ಮಕ್ಕಳ ಶಾಲೆ, ಕಾಲೇಜುಗಳ ಪ್ರವೇಶಕ್ಕಾಗಿ ಅಲೆಯುವಂತಾಗಿದ್ದು, ಕುಟುಂಬದ ನೆಮ್ಮದಿ ಸಂಪೂರ್ಣ ಹದಗೆಡುತ್ತಿದೆ.



ಪೊಲೀಸರಿಗೆ ಅಮಾನತ್ತು ಎಂಬ ‘ಬರೆ’!
“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ” ಎನ್ನುವ ಗಾದೆ ಮಾತು ಸದ್ಯ ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಗಳ ಪಾಲಿಗೆ ಅಕ್ಷರಶಃ ನಿಜವಾಗುತ್ತಿದೆ. ಇಲಾಖೆಯಲ್ಲಿ ಮೇಲಾಧಿಕಾರಿಗಳು ಮಾಡುವ ತಪ್ಪು ಮತ್ತು ವೈಫಲ್ಯಗಳಿಗೆ ಕೆಳಹಂತದ ಪೊಲೀಸ್ ಸಿಬ್ಬಂದಿಗಳು ಅನಗತ್ಯವಾಗಿ ಅಮಾನತು ಶಿಕ್ಷೆಗೆ ಗುರಿಯಾಗುತ್ತಿರುವುದು ತೀವ್ರ ಬೇಸರ ಮೂಡಿಸಿದೆ.ಯಾವುದೇ ಪ್ರಕರಣ ಅಥವಾ ಆಡಳಿತಾತ್ಮಕ ಲೋಪದೋಷಗಳು ನಡೆದಾಗ, ನೈಜ ಕಾರಣ ಹುಡುಕಿ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ತಕ್ಷಣವೇ ಕೆಳಹಂತದ ಕಾನ್ಸ್ಟೆಬಲ್ ಅಥವಾ ಹೆಡ್ ಕಾನ್ಸ್ಟೆಬಲ್ಗಳನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತುಗೊಳಿಸಲಾಗುತ್ತಿದೆ. ಮೇಲಾಧಿಕಾರಿಗಳ ಒತ್ತಡ ಹಾಗೂ ತಪ್ಪು ನಿರ್ಧಾರಗಳಿಗೆ ಬಲಿಯಾಗುತ್ತಿರುವ ಸಿಬ್ಬಂದಿಗಳು, ಹಿರಿಯರ ತಪ್ಪಿಗೆ ತಾವು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈ ‘ಅಮಾನತ್ತಿನ ಬರೆ’ಯಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಕೆಳಹಂತದ ಸಿಬ್ಬಂದಿಗಳ ಮನೋಸ್ಥೈರ್ಯ ಕುಗ್ಗುತ್ತಿದ್ದು ಮತ್ತಷ್ಟು ತೊದರೆಗಳಿಗೆ ಸಿಲುಕುತ್ತಿದ್ದಾರೆ.
ಬದಲಾಗದ ಬ್ರಿಟಿಷ್ ಕಾಲದ ನಿಯಮಗಳು!
ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಪೊಲೀಸ್ ಇಲಾಖೆಯಲ್ಲಿ ಮಾತ್ರ ಇನ್ನೂ ಕೆಲ ಬ್ರಿಟಿಷ್ ಕಾಲದ ಕಠಿಣ ಹಾಗೂ ದಬ್ಬಾಳಿಕೆಯ ನಿಯಮಗಳೇ ಮುಂದುವರಿಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮೇಲಧಿಕಾರಿಗಳ ಒತ್ತಡ, ಕೆಳಹಂತದ ಸಿಬ್ಬಂದಿಯನ್ನು ನಡೆಸಿಕೊಳ್ಳುವ ರೀತಿ ಇಂದಿನ ಆಧುನಿಕ ಯುಗಕ್ಕೂ ಒಗ್ಗದಂತಿದೆ. ಈ ಹಳೇ ನಿಯಮಾವಳಿಗಳೇ ಸಿಬ್ಬಂದಿಯ ನೆಮ್ಮದಿ ಕೆಡಿಸಲು ಪ್ರಮುಖ ಕಾರಣವಾಗಿವೆ.
ಇಲಾಖೆಯ ನಿಯಮಗಳಲ್ಲಿ ಬದಲಾವಣೆ ತುರ್ತು ಅಗತ್ಯವಿದೆ, ಇನ್ನಾದರೂ ಸರ್ಕಾರ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲಾಖೆಯ ನಿಯಮಗಳಲ್ಲಿ ಕಾಲಕ್ಕೆ ತಕ್ಕಂತೆ ವೈಜ್ಞಾನಿಕ ಬದಲಾವಣೆಗಳನ್ನು ತರಬೇಕಿದೆ.
ಸಿಬ್ಬಂದಿಗೆ ನಿಶ್ಚಿತ ಕರ್ತವ್ಯದ ಅವಧಿ ಜಾರಿಗೆ ಬರಬೇಕು.ವಾರಕ್ಕೊಮ್ಮೆ ಕಡ್ಡಾಯ ರಜೆ ಹಾಗೂ ಕೌಟುಂಬಿಕ ಅಗತ್ಯಗಳಿಗೆ ಸ್ಪಂದಿಸುವ ರಜೆ ನೀತಿ ಇರಬೇಕು.ಆರೋಗ್ಯ ತಪಾಸಣೆ ಮತ್ತು ಮಾನಸಿಕ ಒತ್ತಡ ನಿವಾರಣಾ ಶಿಬಿರಗಳು ನಿರಂತರವಾಗಿ ನಡೆಯಬೇಕು.
ಖಾಕಿಯೊಳಗೂ ಒಂದು ಸುಂದರ ಮನಸ್ಸಿದೆ, ಅವರಿಗೂ ಒಂದು ಕುಟುಂಬವಿದೆ ಎಂಬುದನ್ನು ವ್ಯವಸ್ಥೆ ಮರೆಯಬಾರದು. ಪೊಲೀಸರ ಬದುಕು ಅರ್ಧಕ್ಕೇ ಕಮರಿ ಹೋಗುವ ಮುನ್ನ, ಅವರ ಕುಟುಂಬಗಳು ಬೀದಿಗೆ ಬೀಳುವ ಮುನ್ನ ಪೊಲೀಸ್ ಇಲಾಖೆಯಲ್ಲಿ ತಕ್ಷಣವೇ ಸುಧಾರಣೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ.
ಕೋಟ್
ನನ್ನ ಪತಿ ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಸಹ ಬಾಜನರಾಗಿದ್ದರು, ಸದಾ ಡ್ಯೂಟಿ,ಡ್ಯೂಟಿ ಎಂದು ರಾತ್ರಿ ಹಗಲೆನ್ನದೇ ತೆರಳುತ್ತಿದ್ದ ಅವರಿಗೆ ಏಕಾಏಕಿ ಆರೋಗ್ಯ ಸಮಸ್ಯೆ ಎದುರಾಗಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಸರಕಾರ ನಮಗೆ ಅನುಕಂಪ ಆಧಾರಿತ ಉದ್ಯೋಗ ನೀಡಬಹುದು ಹೊರತು ಇಡೀ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ನನ್ನ ಪತಿಯನ್ನು ಕಳೆದುದುಕೊಂಡಿರುವ ನಮ್ಮ ಕುಟುಂಬದ ಸ್ಥಿತಿ ಅಸ್ವಸ್ಥವಾಗಿದೆ.
ಹೆಸರು ಹೇಳಲು ಇಚ್ಛಿಸದ ಮೃತ ಪೊಲೀಸ್ ಸಿಬ್ಬಂದಿಯ ಪತ್ನಿ.
