ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್! ಖಾಲಿ ಹುದ್ದೆಗಳ ಭರ್ತಿ!
ಬೆಂಗಳೂರು : ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ನೀಗಿಸಲು ಸಚಿವ ಯು ಟಿ ಖಾದರ್ ಕ್ರಮ ಕೈಗೊಳ್ಳಲು ಮುಂದಾಗಿದ್ದು ಒಟ್ಟಾರೆ ಖಾಲಿ ಇರುವ 1290 ವೈದ್ಯರನ್ನು ಭರ್ತಿ ಮಾಡಲು ಪ್ಲಾನ್ ರೂಪಿಸಲಾಗಿದ್ದು, ತಕ್ಷಣವೇ 200 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಈ ಕುರಿತು ಬುಧವಾರ ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 1290 ವೈದ್ಯರ ಹುದ್ದೆ ನೇಮಕಾತಿಗೆ ನಿರ್ಧರಿಸಲಾಗಿದೆ. 200 ವೈದ್ಯರ ನೇರ ನೇಮಕ ಮಾಡಿ ಉಳಿದ 1090 ವೈದ್ಯರನ್ನು ಜಿಲ್ಲಾ ಮುಖ್ಯ ಆರೋಗ್ಯ ಅಧಿಕಾರಿ ಮೂಲಕ ಅರ್ಜಿ ಆಹ್ವಾನಿಸಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.ಹಾಗೆಯೇ ರಾಜ್ಯದಲ್ಲಿ 1290 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರು, 892 ಶುಶ್ರೂಷಕರ ಕೊರತೆ ಇದೆ. ಮೊದಲ ಹಂತದಲ್ಲಿ 1290 ವೈದ್ಯರ ನೇಮಕಾತಿಗೆ ನಿರ್ಧರಿಸಲಾಗಿದೆ. 400 ಲ್ಯಾಬ್ ಟೆಕ್ನಿಷಿಯನ್ಸ್, 400 ಫಾರ್ಮಾಸಿಸ್ಟ್, 400 ಶುಶ್ರೂಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ,ಗುತ್ತಿಗೆ ಆಧಾರದಲ್ಲಿ ಸೇವೆಗೆ ಎಂಬಿಬಿಎಸ್ ಅಥವಾ ಪಿಜಿ ವ್ಯಾಸಂಗ ಮಾಡಿದ ವೈದ್ಯರು ಡಿಎಚ್ಒ ಗೆ ಅರ್ಜಿ ಸಲ್ಲಿಸಬಹುದು.
ಹೀಗೆ ನೇಮಕವಾದವರು 5 ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ ಅವರ ಕಾರ್ಯಕ್ಷಮತೆ ಆಧರಿಸಿ ಕಾಯಂ ಸರ್ಕಾರಿ ವೈದ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು. ಅವರು ಪುನಃ ಪರೀಕ್ಷೆ ಬರೆಯುವ ಅಗತ್ಯ ಇರುವುದಿಲ್ಲ ಎಂದು ಹೇಳಿದ್ದಾರೆ.
