ಭಾರಿ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ: ವ್ಯಕ್ತಿಗೆ ಗಂಭೀರ ಗಾಯ, 5 ಮಂದಿ ಪಾರು!
ಶಿರಸಿ : ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಭದ್ರಾಪುರದಲ್ಲಿ ಭಾರಿ ಗಾಳಿ-ಮಳೆಗೆ ಮನೆಯೊಂದರ ಮೇಲೆ ಮರದ ಬೃಹತ್ ಕೊಂಬೆಯೊಂದು ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಗೊಳಗಾಗಿದ್ದು, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಭದ್ರಾಪುರದ ನಿವಾಸಿ ಶಿವು ಬಂಗಾರ ಗೌಡ (55) ಗಂಭೀರವಾಗಿ ಗಾಯಗೊಂಡ ದುರ್ದೈವಿ. ಘಟನೆಯ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಒಟ್ಟು 5 ಮಂದಿ ಇದ್ದು, ಅದೃಷ್ಟವಶಾತ್ ಉಳಿದವರೆಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಗಾಯಾಳು ಶಿವು ಗೌಡ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ದೊಡ್ನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ಶೆಟ್ಟಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಘಟನೆಯ ಕುರಿತು ಮಾಹಿತಿ ಪಡೆದಿರುವ ಸ್ಥಳೀಯ ಶಾಸಕರಾದ ಭೀಮಣ್ಣ ನಾಯ್ಕ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ತಕ್ಷಣವೇ ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಸಹಕಾರವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.


